ಫೊರ್ಯಾಮಿನಿಫೆರ -
ಪ್ರೋಟೊಜೋವ ವಿಭಾಗದ ಸಾರ್ಕೊಡೈನ ವರ್ಗಕ್ಕೆ ಸೇರಿದ ಒಂದು ಉಪವರ್ಗ. ಇದಕ್ಕೆ ಸೇರಿದ ಜೀವಿಗಳು ಹೆಚ್ಚಾಗಿ ಸಮುದ್ರ ವಾಸಿಗಳು; ಸೂಕ್ಷ್ಮಗಾತ್ರದವು. ಕೆಲವು ಜಾತಿಗಳು ಸಿಹಿನೀರಿನಲ್ಲೂ ಬಾಳಬಲ್ಲವು. ಆಳವಿಲ್ಲದ ನೀರಿರುವ ಜಲಾಶಯಗಳ ತಳದಲ್ಲಿ ಇವು ಹೇರಳವಾಗಿರುತ್ತವೆ. ಕೆಲವು ಜಾತಿಗಳು ತೇಲುಜೀವನ ನಡೆಸುವುವು. ಇವುಗಳ ದೇಹದ ಸುತ್ತ ಸುಣ್ಣದಿಂದ ರಚಿತವಾದ ಕವಚದ ರಕ್ಷಣೆಯುಂಟು. ಇವು ಭೂರಿ ಸಂಖ್ಯೆಯ ಗುಂಪುಗಳಲ್ಲಿ ವಾಸಿಸುವುವು. ಮಹಾಸಾಗರದ ತಳದಲ್ಲಿ ಅವು ಎಷ್ಟೊಂದು ವಿಪುಲವಾಗಿವೆ ಎಂದರೆ, ಒಂದೇ ಒಂದು ಗ್ರಾಮ್‍ತೂಕದ ಉಸುಬಿನಲ್ಲಿ 50,000ಕ್ಕೂ ಹೆಚ್ಚು ಜೀವಿಗಳು ಇರುವುವು. ಇವು ಪ್ರಾಚೀನ ಪ್ರಾಣಿಗಳು; ಪ್ರಥಮವಾಗಿ ಕಾಣಿಸಿಕೊಂಡಿದ್ದು ಕೇಂಬ್ರಿಯನ್ ಯುಗದಲ್ಲಿ; ಈಗಲೂ ಬದುಕಿ ಉಳಿದಿವೆ. ಯೂರೋಪ್, ಏಷ್ಯ ಹಾಗೂ ಉತ್ತರ ಆಫ್ರಿಕದಲ್ಲಿ ಕಂಡುಬರುವ ಸುಣ್ಣದ ಕಲ್ಲುಗಳ ರಾಶಿಗಳು ಇವುಗಳಿಂದಲೇ ನಿರ್ಮಾಣವಾಗಿವೆ. ಪೆಟ್ರೋಲಿಯಮಿನ ಪತ್ತೆಕಾರ್ಯದಲ್ಲಿ ಬಂಡೆಗಲ್ಲುಗಳ ಪದರುಗಳನ್ನು ಗೊತ್ತು ಹಚ್ಚಲು, ಈ ಕವಚಗಳ ಫಾಸಿಲುಗಳು ಬಹಳ ಮಹತ್ತ್ವದ ಪಾತ್ರ ವಹಿಸಿವೆ. ಡೈಆಟಮ್ ಮತ್ತು ಅಲ್ಜೀ ಗುಂಪುಗಳಿಗೆ ಸೇರಿದ ಸೂಕ್ಷ್ಮಗಾತ್ರದ ಸಸ್ಯಗಳೇ ಇವುಗಳ ಆಹಾರ. ಸಂಚರಿಸುವುದಕ್ಕಾಗಿಯೂ ಆಹಾರವನ್ನು ಶೇಖರಿಸುವುದಕ್ಕಾಗಿಯೂ ಇವುಗಳ ತಮ್ಮ ದೇಹದ ಎಲ್ಲ ಕಡೆಗೂ ಮಿಥ್ಯಾಪಾದಗಳನ್ನು ಚಾಚುವುವು.
(ಡಿ.ಆರ್.ಎ.;ಎಸ್.ಬಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ